ಗುರುವಾರ, ಏಪ್ರಿಲ್ 12, 2012

ಬೇಧ-ಭಾವ

ಅಂದು ಅವಳ ಮನಸ್ಸು ಅವಳ ಹಿಡಿತದಲ್ಲಿ ಇರಲಿಲ್ಲ. ಅವಳಲ್ಲಿ ಎಂದೂ ಇಲ್ಲದ ಹೊಸ ಭಾವನೆ ಗದಿಗೆದರಿತ್ತು. ಅವಳ ಖುಷಿಯ ಜೊತೆ ತಳಮಳವೂ ಸೇರಿ ಆಕೆಯನ್ನು ಒಂದೆಡೆಗೆ ನಿಲ್ಲದಂತೆ ಮಾಡಿತ್ತು. ಗಂಡ ಮನೆಗೆ ಬರುವುದನ್ನೇ ಬರಹಾಯುತ್ತಿದ್ದ ಆಕೆ, ಕಾಲಿಂಗ್ ಬೆಲ್ ಸಪ್ಪಳವಾಗುತ್ತಿದಂತೆ ಬಾಗಿಲೆಡೆ ಓಡಿದಳು. ಗಂಡ ಎಂದಿನಂತೆ ತನ್ನ ಬ್ಯಾಗ್ ಅನ್ನು ಅವಳ ಕೈಯಲ್ಲಿ ಕೊಟ್ಟು ಒಳನಡೆದ. ಆಕೆ ಆತನನ್ನು ಹಿಂಬಾಲಿಸಿದಳು. ದಿನದಂತೆ ಇರದ ಹೆಂಡತಿಯ ಮುಖ ನೋಡಿ ಇವನೇ ಏನೆಂದು ಕೇಳಿದ. ಆಕೆ ತುಸು ನಾಚುತ್ತಾ ತನ್ನ ಕರುಳಲ್ಲಿ ಅರುಳುತ್ತಿರುವಬಹಳ  ಕುಡಿಯ ಕುರಿತು ಅರುಹಿದಳು. ಆತನೂ ಸಂತಸಗೊಂಡಿದ್ದ. ತಮ್ಮ ಮಗನಿಗೆ ಏನೆಂದು ಹೆಸರಿಡಬೇಕೆಂದು ನಿರ್ಧರಿಸಿದಂತಿತ್ತು ಆ ದಂಪತಿ.

ಹೊಸ ಅನುಭವಗಳೊಂದಿಗೆ, ಕುತೂಹಲಗಳೊಂದಿಗೆ, ಭರವಸೆ, ಉಮ್ಮೇದಿಗಳೊಂದಿಗೆ ಆಕೆಯು ತನ್ನ ಪುಟ್ಟ ಕಂದಮ್ಮನನ್ನು ಒಂಬತ್ತು ತಿಂಗಳು ಹೊತ್ತಿದ್ದಳು. ತನ್ನ ಮುದ್ದಾದ ಮಗುವಿನ ಬರುವಿಕೆಗಾಗಿ ಪ್ರೀತಿಯ ಧಾರೆಯೆರುವ ಗಂಡನೊಂದಿಗೆ ಕಾಯುತ್ತಿದ್ದಳು. ಅಂದು ಸಂಜೆಯ ಸಮಯದಲ್ಲಿ ಆಕೆಯಲ್ಲಿ ಪ್ರಸವದ ನೋವು ಕಾಣಿಸಿಕೊಂಡಿತ್ತು. ತುರ್ತಾಗಿ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ ಆಕೆಯ ಗಂಡ. ತಾಸಿನಷ್ಟು ಪ್ರಯಾಸದ ನಂತರ ಆಕೆಯ ಮುದ್ದಾದ ಮಗು ಆಕೆಯ ಒಡಲಲ್ಲಿ ಮಲಗಿತ್ತು. ಒಂದೆರಡು  ದಿನಗಳಲ್ಲಿ ಆಕೆಯ ನೆಂಟರಿಷ್ಟರು, ಹತ್ತಿರದವರು ಬಂದು ತಾಯಿ, ಮಗುವಿನ ಆರೋಗ್ಯ ವಿಚಾರಿಸಿ ಹೋಗಿದ್ದರು. ಆದರೆ ಅಲ್ಲಿ ಅವಳ ಗಂಡನ ಸುಳಿವೇ ಇರಲಿಲ್ಲ. ಮೂರು ದಿನಗಳ ನಂತರ ಮನೆಗೆ ಹೋದರೂ ಗಂಡ ಮಗುವನ್ನು ಎತ್ತಿ ಕೊಳ್ಳುತ್ತಿರಲ್ಲಿಲ್ಲ. ಮುಖಕ್ಕೆ ಮುಖ ಕೊಟ್ಟು ಮಾತನಾಡಿಸುತ್ತಿರಲಿಲ್ಲ.

ಅಂದು ಆಕೆ ಮಗುವಿನ ಬಟ್ಟೆಗಳನ್ನು ಒಣ ಹಾಕುತ್ತಿದ್ದಳು. ಕಂದಮ್ಮ ಭೂಮಿಗೆ ಬಂದು ಎರಡು ತಿಂಗಳು ಕಳೆದಿತ್ತು. ಒಮ್ಮೆಲೇ ಜೋರಾಗಿ ಮಗು ಅಳುವ ಶಬ್ದ ಕೇಳಿತು. ಒಳಗೆ ಹೋಗಿ ನೋಡಿದರೆ ಗಂಡ ಮಗುವನ್ನು ಜೋರಾಗಿ ಬಡಿಯುತ್ತಿದ್ದ. ಕೂಡಲೇ ಹೋಗಿ ಮಗುವನ್ನು ಕಸಿದು ತನ್ನೆದೆಗೆ ಅವಚಿಕೊಂಡು ಗಂಡನಿಗೆ ಬಾಯಿಗೆ ಬಂದಂತೆ ಬೈದಳು. ತುಸು ಸುಧಾರಿಸಿಕೊಂಡು ಆತನ ವರ್ತನೆಗೆ ಕಾರಣವನ್ನು ಕೇಳಿದ ಆಕೆಗೆ ಏನು ಮಾಡಲು ತೋಚುತ್ತಿರಲಿಲ್ಲ. ತನ್ನ ಮಗುವನ್ನು ಅಪ್ಪಿಕೊಂಡು ಅಳುತ್ತಿದ್ದಳು. ತನ್ನ ಅಪ್ಪನ ತಾನು ಬೇಡ ಎಂಬುದನ್ನೂ ತಿಳಿಯದ ಆ ಹೆಣ್ಣುಗೂಸು, ಅಮ್ಮನ ಅಪ್ಪುಗೆಯಲ್ಲಿ ಅಳುತ್ತಿತ್ತು. ಆದರೆ ಅಮ್ಮ- ಮಗುವಿನ ಬಾಂಧವ್ಯ ಗಟ್ಟಿಯಾಗಿರಲಿಲ್ಲ. ಕೆಲವೇ ದಿನಗಳಲ್ಲಿ ಕಟುಕ ಅಪ್ಪನ ರಾಕ್ಷಸ ಕಾಯಕಕ್ಕೆ ಮಗು ಬಲಿಯಾಗಿತ್ತು. ಜಗತ್ತನ್ನು ನೋಡುವ ಮುನ್ನವೇ ಕಣ್ಣು ಮುಚ್ಚಿತ್ತು.

 P.S. : This blog is written as a tribute to baby AFREEN, who lost her life , before even seeing how beautiful, life was..
Please go through the following link, for the details :
http://indiatoday.intoday.in/story/bangalore-battered-baby-afreen-dead/1/183900.html

ಕ್ರೂರ ಜಗತ್ತಿಗೆ ಧಿಕ್ಕಾರ....!!!

-ಕಾವ್ಯ

ಶುಕ್ರವಾರ, ಜೂನ್ 18, 2010

"ವಜ್ರ" ಪುರಾಣ
ಅಂದು ಎಪ್ರಿಲ್ ೧೨.... ಸೋಮವಾರ ಬೆಳಿಗ್ಗೆ- .೩೦..... ಲಘುಬಗೆಯಿಂದ ಎದ್ದು, ತಣ್ಣೀರ ಆಪೋಶಣೆ ಮಾಡಿ, ಅಗತ್ಯವಿದ್ದ ಸಾಮಗ್ರಿಗಳನ್ನು ತುಂಬಿಸಿಕೊಂಡು ೧೭ ಜನರ ನಮ್ಮ ತಂಡ ಒಂದೆಡೆ ಸೇರಿದೆವು. ಅನಿವಾರ್ಯ ಕಾರಣಗಳಿಂದ ೭.೩೦ ಕ್ಕೆ ಬೆಳಗಾವಿಯನ್ನು ಸೇರಬೇಕಿದ್ದ ನಾವು, ಧಾರವಾಡ ಬಿಡಲು ಅಷ್ಟು ಹೊತ್ತಾಯಿತು. ದಾರಿಯಲ್ಲೆಲ್ಲಾ ಅಂತ್ಯಾಕ್ಷರಿಯ ಚಿಲಿಪಿಲಿ.

ಬೆಳಗಾವಿ ಸೇರಿದೊಡನೆ, ನಮಗಾಗಿ ಕಾಯುತ್ತಿದ್ದ ವಾಹನದಲ್ಲಿ ನಮ್ಮ ಪ್ರಯಾಣ ಆರಂಭ. ಅದರಲ್ಲಿ ಆಸೀನರಾದ ನಂತರ ಜಾಂಬೋತಿಯೆಡೆ ನಮ್ಮ ಗಾಡಿ ಸಾಗಿತು. ಬೆಳಗಾವಿಯಿಂದ ಜಾಂಬೋತಿಯವರೆಗೆ ದಾರಿ ಸುಗಮವಾಗಿತ್ತು. ಅದು ಘಟ್ಟಗಳಿಂದ ಕೂಡಿದ ಪ್ರದೇಶ. ಜಾಂಬೋತಿ ಸೇರುವವರೆಗು ನಾವೆಲ್ಲ "ಡಂಬ್ ಶರಾಡ್ಸ್" (!!!) ಆಡುತ್ತ ಸಮಯದ ಸದುಪಯೋಗ ಮಾಡುತ್ತಿದ್ದೆವು. ಜಾಂಬೋತಿ ತಲುಪಿದೊಡನೆ ಎಲ್ಲರ ಬಾಯಿಗು ಬೀಗ. ಚುರುಕ್ಕೆನ್ನುತ್ತಿದ್ದ ಹೊಟ್ಟೆಯ ಹತಾಶೆಯನ್ನು ತಣಿಸಿ,ನಮ್ಮ ಪ್ರಯಾಣವು "ವಜ್ರ"ದೆಡೆ ಸಾಗಿತ್ತು.

ಅಲ್ಲಿಂದ ಮುಂದೆ ಮಣ್ಣಿನ ರಸ್ತೆ. ಏರು ತಗ್ಗಾದ ದಾರಿಗಳು. ರಸ್ತೆಯಿಂದ ಬರುತ್ತಿದ್ದ ಧೂಳು, ನಮ್ಮ ಆಟವನ್ನು ಮಣ್ಣು ಪಾಲು ಮಾಡಿತ್ತು. ಇನ್ನು ವಾಹನವು ಮುಂದೆ ಹೋಗಲು ಸಾಧ್ಯವಿಲ್ಲ ಎನ್ನುವ ಹಂತಕ್ಕೆ ಬಂದಾಗ ಕಾಲಿನ ಮೊರೆ ಹೋಗುವುದು ಅನಿವಾರ್ಯವಾಗಿತ್ತು.

ಅದು ಬಹಳ ಇಡಿದಾದ ದಾರಿ. ಕೈಯಲ್ಲಿ ಊರುಗೋಲನ್ನು ಹಿಡಿದು ಚಾರಣವನ್ನು ಪ್ರಾರಂಭಿಸಿದೆವು. ಮಧ್ಯ ಮಧ್ಯದಲ್ಲಿ, ಫೋಟೊ ಪೋಸ್ ಕೊಡುತ್ತ, ಒಬ್ಬರಿಗೊಬ್ಬರು ಛೇಡಿಸುತ್ತ, ಕೆರಳಿಸುತ್ತ ಇರುವೆಯ ಸಾಲಿನಂತೆ ಸಾಗುತ್ತಿತ್ತು ನಮ್ಮ ಸಾಲು. ಮುಂದೆ ಯಾರೊಬ್ಬರು ನಿಂತರೂ ಹಿಂದೆ ಎಲ್ಲರೂ ನಿಲ್ಲಲೇ ಬೇಕದ ಪರಿಸ್ಥಿತಿ. ಹಾಗೆಯೇ ಸುಮಾರು ಒಂದೂವರೆ ಕಿಲೋಮಿಟರ್ ನಡೆದ ನಂತರ ನೀರಿನ ಜುಳುಜುಳು ಶಬ್ದ ಕಿವಿಗೆ ಬೀಳತೊಡಗಿತು. ಸುಸ್ತಾಗಿದ್ದ ಶರೀರಗಳು ಒಮ್ಮೆಲೇ ಚುರುಕುಗೊಂಡವು. ಅಲ್ಲಿಂದ ಅರ್ಧ ಕಿಲೋಮಿಟರ್ ನಡೆದ ನಂತರ ನೀರಿನ ಝರಿಯು ಗೋಚರಿಸಿತು. ಅಬ್ಬಾ!! ಬಂತಲ್ಲಾ ಎಂದು ಮನಸ್ಸಿಗೆ ಸಮಾಧಾನ. ಅಲ್ಲಿ ಮುಖಕ್ಕೆಲ್ಲ ನೀರನ್ನು ಚಿಮ್ಮಿಸಿಕೊಂಡು ಕುಳಿತುಕೊಳ್ಳುವಾಗ ತಿಳಿಯಿತು, ಇನ್ನು ಅರ್ಧ ದಾರಿಯನ್ನಷ್ಟೇ ಕ್ರಮಿಸಿದ್ದೇವೆಂದು.
ಮತ್ತೊಮ್ಮೆ ದಣಿವಾರಿದ ದೇಹದಲ್ಲಿ ಶಕ್ತಿಯನ್ನು ತುಂಬಿಕೊಳ್ಳುತ್ತ, ಚಾರಣವನ್ನು ಮುಂದುವರೆಸಿದೆವು. ಅಲ್ಲಿಂದ ಮುಂದೆ ನದಿಯ ದಡದಲ್ಲೇ ಪ್ರಯಾಣ. ಮನಸ್ಸಿಗೆ ಹಿತ ನೀಡುವ ಜುಳುಜುಳು ನದಿ, ತಂಪಾದ ನೀರು, ಅಲ್ಲಲ್ಲಿ ಈಜುವ ಮೀನುಗಳು.... ಹಾದಿ ಎಷ್ಟು ಸುಂದರವಾಗಿತ್ತೋ ಅಷ್ಟೆ ಭಯಂಕರವಾಗಿಯೂ ಇತ್ತು. ಕೊರೆಯುವ ಬಂಡೆಕಲ್ಲುಗಳು, ಕಲ್ಲಿನ ಕೊರಕುಗಳಲ್ಲಿರಬಹುದಾದ ಹಾವು ಛೇಳುಗಳ ಭಯ, ಸಮತಟ್ಟಾಗಿರದ ಹಾದಿ. ಕೆಲವೊಮ್ಮೆ ಬಿದ್ದ ಮರದ ದಿಬ್ಬಗಳ ಮೇಲೊ, ಕಲ್ಲುಗಳ ಮೇಲೋ ಹತ್ತಿ, ಇಳಿದೋ ಹೋಗಬೇಕಾದ ಪರಿಸ್ಥಿತಿ. ಒಬ್ಬರಿಗೊಬ್ಬರು ಸಹಾಯ ಮಾಡುತ್ತ, ಅತ್ತ- ಇತ್ತ ಇಳಿಯುತ್ತ- ಹತ್ತುತ್ತ, ಅಂತೂ ಇನ್ನೇನು ಉಸಿರು ನಿಲ್ಲುತ್ತದೆಯೇನೋ ಎಂಬಂತ ಹೊತ್ತಿನಲ್ಲಿ ಕಂಡಿತು ದೊಡ್ಡದಾದ ಬಂಡೆ, ಅದರ ಹಿಂದೆಯೇ ದಬ ದಬ ಶಬ್ದ.
ಅಂದು ಆ ಸಮಯದಲ್ಲಿ ಮನಸ್ಸಿಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಏನೋ ಒಂದು ಸಾಧಿಸಿದ ಅನುಭವವಾಗಿತ್ತು. ಹಾಲಿನ ನೊರೆಯಷ್ಟು ಬಿಳುಪಾಗಿದ್ದ ಜಲಧಾರೆ ಧುಮ್ಮಿಕ್ಕುತ್ತ, ಪ್ರಪಾತಕ್ಕೆ ಅಪ್ಪಳಿಸುತ್ತಿತ್ತು. ಕಣ್ಣಿಗೆ ಕುಕ್ಕುವಂತಿದ್ದ ಆ ಜಲರಾಶಿಯ ಸೌಂದರ್ಯ, ಇನ್ನೂ ಮನಸ್ಸಿನಲ್ಲಿ ಹಸಿರಾಗಿದೆ.

ಅಲ್ಲಿನ ವಾತಾವರಣದ ಸೌಂದರ್ಯವನ್ನು ಸವಿಯುತ್ತ, ಹಲವು ಕುರುಕುರು ತಿಂಡಿಗಳನ್ನು ಹಲ್ಲಿನ ಗಿರಣಿಯಲ್ಲಿ ಹುಡಿಯಾಗಿದ್ದವು. ಹೊರಗಿನ ಪ್ರಪಂಚವನ್ನೇ ಮರೆತ ಅನುಭವ ಅಂದು ನಮಗಾಗಿತ್ತು. ಮನಸ್ಸು ಇನ್ನೂ ಆ ಜಾಗದ ಆಸರೆಯನ್ನು ಬಯಸುತ್ತಿದ್ದರೂ, ಉರುಳುತ್ತಿದ್ದ ಸಮಯ ನಮ್ಮ ಆಸೆಗೆ ಅಡ್ಡಗಾಲು ಹಾಕಿತ್ತು. ಅಂತೆಯೇ ಅಲ್ಲಿಂದ ಮರಳಿ ನಡೆಯಲು ಆರಂಭಿಸಿದೆವು
ನೈಜ ಸೊಬಗಲ್ಲಿ ದಣಿವಾರಿಸಿಕೊಂಡಿದ್ದರಿಂದ ಅಷ್ಟೊಂದು ಆಯಾಸವೆನಿಸುತ್ತಿರಲಿಲ್ಲ. ಅಲ್ಲಿಯೇ ಮಧ್ಯದಲ್ಲಿ ಆಡಿದ್ದ ನೀರಾಟ ಆಯಾಸವನ್ನು ಆಹ್ಲಾದಗೊಳಿಸಿತ್ತು. ಆದರೆ ಅದು ಬಹಳ ಕಾಲ ಉಳಿಯಲಿಲ್ಲ. ಇಡಿದಾದ ಏರಿಕೆಯಲ್ಲಿದ್ದ ಬೆಟ್ಟವನ್ನು ನೋಡಿ ಎಲ್ಲರೂ ಗಾಭರಿಗೊಂಡಿದ್ದರು. ಖಾಲಿಯಾಗಿದ್ದ ನೀರು, ತಿಂಡಿಯ ಶೇಖರಣೆಗಳು ನಮ್ಮ ಕಷ್ಟವನ್ನು ಹೆಚ್ಚಿಸಿದ್ದವು. ಯಾರಿಗೂ ಮಾತನಾಡುವ ಶಕ್ತಿ ಇರಲಿಲ್ಲ. ವಾಹನವಿರುವವರೆಗೆ ಹೋಗಿ ಮುಟ್ಟುತ್ತೇವೆಂಬ ನಂಬಿಕೆಯೂ ಇರಲಿಲ್ಲ. ಅಂತೂ ನಡೆದೂ, ನಡೆದು ಕೊನೆಯಲ್ಲಿ ಬಂದು ಮುಟ್ಟಿದೆವು. ಒಂದು ರೀತಿಯಲ್ಲಿ, ಹೋದ ಜೀವ ಮರಳಿ ಬಂದಂತಾಗಿತ್ತು.

ವಾಹನವನ್ನೇರಿ, ಮರಳಿ ಜಾಂಬೋತಿಯೆಡೆ ಪ್ರಯಾಣ ಬೆಳೆಸಿದೆವು. ಹಲವರು ನಿದ್ರಿಸುತ್ತಿದ್ದರೆ, ಉಳಿದವರು ಸುಮ್ಮನೆ ಕುಳಿತಿದ್ದರು. ಸುಮಾರು ೮-೧೦ ಕೀ.ಮೀ. ನಡೆದ ನಮಗೆ ಹೊಟ್ಟೆಯು ತನ್ನ ಇರುವಿಕೆಯನ್ನು ಹೇಳುತ್ತಿತ್ತು. ಜಾಂಬೋತಿಯಲ್ಲಿ ಹೊಟ್ಟೆಗೆ ಆಹಾರವು ಬಿದ್ದ ನಂತರ ಮತ್ತೆ ಉತ್ಸಾಹ ಮರುಕಳಿಸಿತ್ತು. ಅಲ್ಲಿಂದ ಮತ್ತೆ ಹಾಡುತ್ತ, ನಗುತ್ತ ಬೆಳಗಾವಿಯೆಡೆ ಸಾಗಿದೆವು.ಬೆಳಗಾವಿ ಸೇರಿದ ನಂತರ ಹಲವರ ಇಷ್ಟದ ಮೇರೆಗೆ ಸುಂದರವಾದ ಸರೋವರದಲ್ಲಿ ದೋಣಿ ವಿಹಾರವನ್ನು ನಡೆಸಿದೆವು. ಹೀಗೆಯೆ ಹಲವು ನೆನಪುಗಳನ್ನು, ಖುಷಿಗಳನ್ನು ಹೊತ್ತು, ನಮ್ಮ ಗಾಡಿ ಧಾರವಾಡದೆಡೆಗೆ ಸಾಗಿತ್ತು.

ಹೀಗಿತ್ತು ನಮ್ಮ ಅಂದಿನ, ಆ ಮರೆಯಲಾಗದ ಚಾರಣ.

ಆ ಎಲ್ಲಾ ನೆನಪುಗಳನ್ನ ನನಗಾಗಿ ಕಟ್ಟಿಕೊಟ್ಟ ಸ್ನೇಹಿತರಿಗೆಚೀಯರ್ಸ್ಹೇಳುತ್ತ
- ಕಾವ್ಯ


ಗುರುವಾರ, ಜೂನ್ 17, 2010

ನೆನಪುಗಳ ಮಾತು ಮಧುರ

ಯಾವಾಗಲೂ ಏನನ್ನಾದರು ಬರೆಯಲು ಕೂತರೆ ಮೊದಲು ನನ್ನ ತಲೆಯಲ್ಲಿ ಬರೋ ವಿಷಯ ಅಂದರೆ "ಜೀವನ". ನಾನೇನು ಜೀವನದ ಬಗ್ಗೆ ಬರೆಯುವಷ್ಟು ಅನುಭವಿಯಲ್ಲ. ಆದರು ಅಲ್ಲಿ ಇಲ್ಲಿ, ಚೂರು ಪಾರು ಜೀವನದ ರುಚಿಯನ್ನು ಕಂಡಿದ್ದೇನೆ, ಅನುಭವಿಸಿದ್ದೇನೆ.

ಹಮ್...... ಶಾಲೆಯಲ್ಲಿದ್ದಾಗ ಅದು ಇದು ಸ್ಪರ್ಧೆಗಳ ಸಲುವಾಗಿ ಅಥವಾ ಸುಮ್ಮನೆ ಸಮಯ ಕೊಲ್ಲುವುದಕ್ಕಾಗಿ ಬರೆಯುವ ರೂಢಿ ಇತ್ತು. ನಂತರ ಇಂಜಿನೀಯರಿಂಗ್ ಬಂದ ಮೇಲೆ ಅಂತರಾಳವನ್ನು ಹಗುರಗೊಳಿಸುವ ಪ್ರಯತ್ನವೇ ನಡೆದಿರಲಿಲ್ಲ. ಹೆಚ್ಚು ಕಮ್ಮಿ ನಾನೂ ಇಂಜಿನ್ ಆಗಿಬಿಟ್ಟಿದ್ದೀನೇನೋ ಅನಿಸುತ್ತಿತ್ತು. ಆದರೆ ಈಗ ಒಮ್ಮೆ ಕಣ್ಮುಚ್ಚಿ ಕುಳಿತರೆ ಎಷ್ಟೊಂದು ಗರಿ ಗರಿ ನೆನಪುಗಳು.

ಇಂಜಿನೀಯರಿಂಗ್ ಸೇರಿಕೊಂಡರೆ ಸಾಕು, ಆಮೇಲೆ ಎಲ್ಲವೂ ಸೆಟಲ್ ಆದ ಹಾಗೆ ಎನ್ನುವುದು ತಲೆಯಲ್ಲಿತ್ತು. ಅದಕ್ಕಾಗಿ ’ಪಿಯುಸಿ’ಯಲ್ಲಿರುವಾಗ ಟಿ.ವಿ., ನೆಂಟರಿಷ್ಟರು ಎಲ್ಲ ಮೋಹಗಳನ್ನು ಬದಿಗಿಟ್ಟು ಓದಿದ್ದೇ ಓದಿದ್ದು. ನಂತರ ಇಲ್ಲಿ ಬಂದಮೇಲೆ ’ಇಂಜಿನೀಯರಿಂಗ್ ಒಂದು ಚೆನ್ನಾಗಿ ಮಾಡಬೇಕಂತೆ, ಆವಾಗ ಲೈಫ್ ಸೆಟಲ್ ಆದಂತೆ’ ಎಂದು ಮತ್ತೊಬ್ಬರ ನುಡಿಮುತ್ತು.

ಜೀವನ ಅಂದರೆ ಹಾಗೆ - " ಎಂದೋ ಬರುವ ಸುಖದ ಸಲುವಾಗಿ, ಕೊನೆಯಿಲ್ಲದ ಕನಸುಗಳ ಕೊಂಡಿಯನ್ನು ಜೊಡಿಸುತ್ತಾ ಜೋಡಿಸುತ್ತ ಸಾಗುವ ಪಯಣ".

ಅಪ್ಪ- ಅಮ್ಮನನ್ನು, ಮನೆಯನ್ನು, ಊರನ್ನು ಬಿಟ್ಟು ರೂಢಿಯೇ ಇಲ್ಲದವಳು ಹೊಸ್ಟೆಲ್ ಸೇರಿದರೆ ಹೇಗಾಗಬಹುದು??? ನನ್ನ ಸ್ತಿಥಿಯೂ ಹಾಗೇ ಆಗಿತ್ತು. ಮನೆಯಲ್ಲಿ ಹೇಳಲು, ಕೇಳಲು ಯಾರೂ ಇರಲಿಲ್ಲ. ಇದ್ದದ್ದೆಲ್ಲವೂ ನಂದೇ. ಹಾಗೇ ಹೊಸ್ಟೆಲ್ನಲ್ಲು ಆಗಬೇಕು ಅಂದರೆ ಯಾರು ಕೇಳುತ್ತಾರೆ?? ದಿನವೂ ಯಾವುದಾದರು ಒಂದು ವಿಷಯಕ್ಕೆ ಜಗಳ. ಸಣ್ಣ ಪುಟ್ಟದ್ದಕ್ಕೂ ಮಾತಿನ ಚಕಮಕಿ. ಸುಮ್ಮನೆ ಕಿತ್ತಾಟ. ಆದರೆ ಅದೇ ಜಗಳಗಳು ಇಂದು - ’ ಎಂದು ಮರೆಯದ ಗೆಳೆತನಕ್ಕೆ ಬುನಾದಿಯಾಗಿವೆ.

ಇಂಟರಾಕ್ಶನ್ ಸೆಷನ್ಗಳು ಹೊಸ್ಟೆಲ್ನ ಅವಿಭಾಜ್ಯ ಪ್ರಕ್ರಿಯೆ. ಸಣ್ಣವರಿದ್ದಾಗ ಹಾಡುತ್ತಿದ್ದ ಪದಗಳಿಂದ ಹಿಡಿದು, ಪೋಕಾಕಿ ಕುಣಿತದವರೆಗೂ.... ಭರತನಾಟ್ಯದ ಆರಂಭದಿಂದ ನನ್ನಂತವರನ್ನು(!!!) ಹಾಡಿಸಿದ್ದರವರೆಗೂ... ಹೀಗೆ ಪಟ್ಟಿ ಬೆಳೆಯುತ್ತದೆ. ನೆನೆಸಿಕೊಂಡರೆ ಮನಸ್ಸಲ್ಲಿ ಇನ್ನೂ ಭಾವನೆಗಳು ಕಚಗುಳಿಯಿಡುತ್ತವೆ.

ಇನ್ನು ಕಾಲೇಜ್ ವಿಷಯಕ್ಕೆ ಬಂದರೆ, ಅಬ್ಬಾ!!!! ಎಷ್ಟೊಂದು ಹೊಸ ಮುಖಗಳು. ಎಲ್ಲಿಂದ ಬರುತ್ತಾರಪ್ಪಾ ಇಷ್ಟೊಂದು ಜನ ಅಂತ.... ಮೊದಲ ದಿನ ಮನಸ್ಸಲ್ಲಿ ಭಯ ಬಿಟ್ಟರೆ ಬೇರೇನೂ ಇರಲಿಲ್ಲ. ಮೊದಲೇ ಧಾರವಾಡದ ಭಾಷೆ. ಪ್ರತಿಯೊಂದು ಶಬ್ದವೂ ಬೈದಂತೆ ಅನಿಸುತ್ತಿತ್ತು. ಆದರೆ ಗಡಿಯಾರ ಹತ್ತು ಸುತ್ತು ಹೊಡೆಯುವುದರಲ್ಲಿ ಹಲವರು ಖಾಸ್ ಖಾಸ್ ದೋಸ್ತರಗಿದ್ದರು. ಮತ್ತೆರಡು ದಿನದಲ್ಲಿ ಒಂದು ಪುಟ್ಟ ಗ್ಯಾಂಗ್ ಮಾಡಿಕೊಂಡು ತರಗತಿಯಲ್ಲಿ ಗಲಾಟೆ ಮಾಡಲು ಆರಂಭಿಸಿದ್ದೆವು,ಹಾಗೆ ಬೈಸ್ಕೊಂಡ್ದು ಇದ್ದೆವು.

ವಿದ್ಯಾರ್ಥಿ ಜೀವನದಲ್ಲಿ ಹಲವರು ( ಎಲ್ಲರೂ ಅಂದರೆ ಉಚಿತವಗಬಹುದೇನೋ) ದ್ವೇಷಿಸುವ ಸಮಯವೆಂದರೆ ಪರೀಕ್ಷಾ ಸಮಯ. ಆ ನಿದ್ರೆ ಇಲ್ಲದ ರಾತ್ರಿಗಳು, ನಮಗೇ ಅರ್ಥವಾಗದ್ದನ್ನು ಬೇರೆಯವರು ಅರ್ಥ ಮಾಡಿಕೊಳ್ಳಲಿ ಅಂತ ನಿರೀಕ್ಷಿಸಿ ಬರೆಯುವ ಉತ್ತರ ಪತ್ರಿಕೆ, ನಿದ್ರೆಯನ್ನು ತಡೆದು ತಡೆದು ಓದೋ ರೀತಿ, ಮತ್ಯಾವತ್ತೂ ಸಿಗುವುದಿಲ್ಲ.

ಹೀಗೆ ಹತ್ತು ಹಲವು ಆಸೆ, ನಿರೀಕ್ಷೆ, ಆತಂಕ, ಭಯ, ಕನಸುಗಳೊಂದಿಗೆ ಪ್ರಾರಂಭವಾದ ವಿದ್ಯಾರ್ಥಿ ಜೀವನ - ಇಂದು ತನ್ನ ಕೊನೆಯ ಘಟ್ಟಕ್ಕೆ ಬಂದಿದೆ. ಮನೆಗೆ ಬಂದು ಕುಳಿತ ಈ ಘಳಿಗೆಯಲ್ಲಿ, ಮನಸ್ಸು ಹಳೆಯ ಸವಿ ನೆನಪುಗಳನ್ನು ಮೆಲುಕು ಹಾಕುತ್ತಿದೆ. ಏನೂ ಇಲ್ಲವೆಂದರೂ ಏನನ್ನೋ ಕಳೆದುಕೊಂಡಿರುವ ಭಾವನೆ ಮನಸ್ಸನ್ನು ಕಾಡುತ್ತಿದೆ.
ಕಾಡುತ್ತಿರುವ ನೆನಪುಗಳನ್ನು ಕಣ್ಮುಚ್ಚಿ ಸವಿಯುತ್ತಿರುವ

- ಕಾವ್ಯ